ಬ್ಯಾಂಕರ್ಸ್ ತರಬೇತಿ ಕಾಲೇಜಿನಲ್ಲಿರುವಾಗ ಮಂಗಳೂರಿಂದ ಬೊಂಬಾಯಿ ಮಾರ್ಗವಾಗಿ ದೆಹಲಿಗೆ ಹೊರಟಿದ್ದೆ. ಮರುದಿನ ಬೆಳಿಗ್ಗೆ ಹನ್ನೊಂದು ಗಂಟೆಗೆ ದೆಹಲಿಯಲ್ಲಿ ತರಬೇತಿಗೆ ಹಾಜರಾಗಬೇಕಿತ್ತು. ಸಂಜೆ ಐದು ಗಂಟೆಗೆ ಬೊಂಬಾಯಿಯಲ್ಲಿ ಏರ್ ಪೋರ್ಟ್ ಗೆ ತಲುಪಿದರೆ ನನಗೊಂದು ಶಾಕ್ ಎದುರಾಗಿತ್ತು. ಸಂಜೆ ಏಳು ಗಂಟೆಗೆ ಏರ್ ಇಂಡಿಯಾ, ಯಾವುದೇ ಫ್ಲೈಟ್ ದೆಹಲಿಗೆ ಇಲ್ಲವೆಂದರು. ನಾನು ಫ್ರಂಟ್ ಲೈನ್ ಸಿಬ್ಬಂದಿಯನ್ನು ಹೊರತು ಪಡಿಸಿ,  ಮ್ಯಾನೇಜರ್ ನವರನ್ನು ಸಂಪರ್ಕಿಸಿದಾಗಲೂ, ಇದೇ ಉತ್ತರ. ನನಗೆ ಕೊಂಚ  ಗಾಬರಿಯಾಯಿತು. ಅದರೂ ನಾನು ಕೂಡಲೇ, ನನ್ನ ಆನ್ ಲೈನಿನ ಟಿಕೇಟ್ ನಲ್ಲಿ ಹಿಂಬರಹ (endorsements) ಕೊಡುವಿರಾ ಅಥವಾ ಪರ್ಯಾಯ ವ್ಯವಸ್ಥೆಯಿದೆಯಾ ಎಂದು ಕೇಳಿದೆ. ಮರುದಿನ ಮಧ್ಯಾಹ್ನ ಆಗಬಹುದು ಎಂದರು. ಹಾಗಾದರೆ ಹಿಂಬರಹ ಕೊಡಿಯೆಂದಾಗ, ಅವರು ಒಪ್ಪಿದರು.  

ನಾನು ಕೂಡಲೇ ಮರುದಿನ ಬೆಳಿಗ್ಗೆಯ ಮೊದಲನೇ ಫ್ಲೈಟ್ ಬುಕ್ ಮಾಡಿ ದೆಹಲಿಗೆ ಹೋಗುವ ವ್ಯವಸ್ಥೆಯನ್ನು ಬೇರೆ ಫ್ಲೈಟ್ ನಲ್ಲಿ ಮಾಡಿಕೊಂಡೆ. ದೆಹಲಿ ಡ್ಯೂಟಿ ಮುಗಿಸಿ, ಮಾಡಿದ ಮೊದಲನೇ ಕೆಲಸವೆಂದರೆ, ಏರ್ ಇಂಡಿಯಾದ ವಿಳಾಸ ಅಂತರ್ಜಾಲದಲ್ಲಿ ಹುಡುಕಿ, ಅವರಿಗೊಂದು ಪತ್ರ ಬರೆದೆ. ಉತ್ತರವಿರದ ಕಾರಣ, ಫ್ಲಿಪ್ ಕಾರ್ಟಿನ ಅನುಭವವಿದ್ದುದರಿಂದ, ಗ್ರಾಹಕರ ಕೋರ್ಟಿನಲ್ಲಿ ದಾವೆ ಹೂಡಿದೆ.  

ಇಲ್ಲಿ ನನಗೆ ಬಹಳ ಸುಲಭವಾಯಿತು. ಕಾರಣ ಅವರು ಕೋರ್ಟಿಗೆ ಬಾರದ ಕಾರಣ (ex-party) ನನ್ನ ಪರವಾಗಿ ತೀರ್ಪು ಬಂದಿತು. ಏರ್ ಇಂಡಿಯಾದ ಪ್ರಯಾಣದ ಖರ್ಚು, ನನಗಾಗಿರುವ ತೊಂದರೆ, ವಕೀಲರ ಶುಲ್ಕ ಸೇರಿಸಿ ರೂಪಾಯಿ ಹದಿನೈದು ಸಾವಿರದ ತೀರ್ಪು ಕೊಟ್ಟಿದ್ದರು. ಈ ಕೇಸ್ ನಲ್ಲಿ ಕಷ್ಟದ ಕೆಲಸವಾಗಿದ್ದು, ಏರ್ ಇಂಡಿಯಾದವರಿಗೆ ನೋಟೀಸ್ ತಲುಪಿಸುವುದು. ಮತ್ತೊಮ್ಮೆ ಅವರ ವಿಳಾಸ ಮತ್ತು ಯಾವ ಅಂಚೆ ಕಛೇರಿಯ ವ್ಯಾಪ್ತಿಯಲ್ಲಿ ಬರುತ್ತದೆಯೆಂಬ ಸ್ಪಷ್ಟನೆ ಕೊಡುವ ಅಗತ್ಯವಿತ್ತು. ಕೋರ್ಟಿಗೆ ಹಾಜರಾಗುವುದು ನನಗೆ ಕಷ್ಟದ ಕೆಲಸವಾಗಿದ್ದರಿಂದ, ಈ ಕೇಸನ್ನು ಮೊದಲಿನಿಂದಲೇ ವಕೀಲರಿಗೆ ವಹಿಸಿದ್ದೆ.  

- ಪ್ರಕಾಶ್ ಎನ್, ಮಂಗಳೂರು.